ಹುಬ್ಬಳ್ಳಿಯಲ್ಲೊಂದು ಭೀಕರ, ಅಮಾನವೀಯ ಕೃತ್ಯ

Share
0Shares

,
ಹುಬ್ಬಳ್ಳಿಯಲ್ಲೊಂದು ಭೀಕರ, ಅಮಾನವೀಯ ಕೃತ್ಯ ನಡೆದಿದೆ. ಫಯಾಜ್‌ ಎಂಬುವವನು ನೇಹಾ ಎಂಬ ವಿದ್ಯಾರ್ಥಿನಿಯನ್ನು ಬಿವಿಬಿ ಕಾಲೇಜಿನ ಆವರಣದಲ್ಲೇ ಇರಿದು ಕೊಂದಿದ್ದಾನೆ. ಇಬ್ಬರೂ ಪರಿಚಿತರು. ಆಕೆ ಮದುವೆಗೆ ಒಪ್ಪಲಿಲ್ಲ ಎಂಬುದೇ ಕೊಲೆಗೆ ಕಾರಣ ಎನ್ನಲಾಗಿದೆ. ಅವನ ಬಂಧನವಾಗಿದೆ. ತನಿಖೆ, ಕಾನೂನುಪ್ರಕ್ರಿಯೆ ನಡೆಯುತ್ತಿದೆ. ಕರುಳು ಕಲಕುವ ಘಟನೆಯದು. ಆ ಹೆಣ್ಣುಮಗಳ ಬದುಕಿನ ಈ ರೀತಿಯ ಅಂತ್ಯಕ್ಕೆ ಕಾರಣವಾದ ಮನಸ್ಥಿತಿ ನಾಶವಾಗಲಿ; ಕೃತ್ಯ ಮರುಕಳಿಸದಿರಲಿ.
ಇಂತಹ ಪ್ರಕರಣ ನಡೆದಾಗಲೆಲ್ಲಾ ನಾವು ಒದ್ದಾಟಕ್ಕೆ ಸಿಕ್ಕಿಕೊಳ್ಳುತ್ತೇವೆ. ಎಲ್ಲರೂ ಕೃತ್ಯವನ್ನು ಖಂಡಿಸುತ್ತೇವೆ; ಶಿಕ್ಷೆಯಾಗಲಿ ಎನ್ನುತ್ತೇವೆ. ಇಂತಹ ಯಾವುದೇ ಪ್ರಕರಣ ನಡೆದಾಗಲೂ ನಾವು ಅದನ್ನು ಮಾಡುತ್ತೇವೆ. ನಮ್ಮಲ್ಲಿ ಕೆಲವರು ಈ ರೀತಿಯ ಪ್ರಕರಣಗಳೇ ಸಮಾಜದಲ್ಲಿ ನಡೆಯಬಾರದು ಎಂಬುದಕ್ಕೆ ಕೆಲವು ದೀರ್ಘಕಾಲಿಕ ಪ್ರಯತ್ನಗಳನ್ನೂ ಮಾಡುತ್ತಿರುತ್ತೇವೆ; ವಿಶೇಷವಾಗಿ ಮಹಿಳಾ ಸಂಘಟನೆಗಳು ಅಂಥವನ್ನು ಮಾಡುತ್ತಿದ್ದಾರೆ. ಆದರೆ, ಕೊಲೆಗಳಲ್ಲಿ ಧರ್ಮವನ್ನು ಹುಡುಕುವ, ಒಂದು ನಿರ್ದಿಷ್ಟ ಧರ್ಮದ ಆರೋಪಿ ಇದ್ದರಷ್ಟೇ ಇದ್ದಕ್ಕಿದ್ದಂತೆ ಮೇಲೆದ್ದು ನಿಲ್ಲುವ ಒಂದು ಗುಂಪು ಈ ದೇಶದಲ್ಲಿದೆ. ಅವರಿಗೆ ಇಂತಹ ಕೊಲೆಯಾದಾಗ ನೋವಾಗುವುದಿಲ್ಲ; ಖುಷಿಯಾಗುತ್ತದೆ. ಹೌದು, ಖುಷಿಯಾಗುತ್ತದೆ. ಅಂಥವರು ಈಗ ಮೇಲೆದ್ದು ನಿಲ್ಲುತ್ತಾರೆ. ಇಲ್ಲದ ಬಣ್ಣ ಕಟ್ಟುತ್ತಾರೆ. ಅದರಲ್ಲೂ ಚುನಾವಣೆ ಹತ್ತಿರದಲ್ಲಿರುವಾಗ ಅವರು ಇನ್ನೂ ಉನ್ಮಾದಕ್ಕೊಳಗಾಗುತ್ತಾರೆ. ನಾವೂ ಕೊಲೆಯಿಂದ ಬೇಸರದಲ್ಲಿರುವವರು, ಕೊಲೆಯಲ್ಲಿ ಧರ್ಮದ ಆಧಾರದ ಮೇಲೆ ಚುರುಕಾಗುವ ಇಂತಹ ಅಮಾನವೀಯ ವಿದ್ಯಮಾನವನ್ನು ನೋಡಿ ಇನ್ನೂ ಖಿನ್ನರಾಗುತ್ತೇವೆ.
ಇಲ್ಲ, ಹೀಗಾಗಬಾರದು. ನಾವು ಇದಕ್ಕೆ ಪ್ರತಿಕ್ರಿಯಿಸಬೇಕು. ಆ ಕುರಿತು ನನ್ನ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.
1. ಈ ಘಟನೆ ಭೀಕರ, ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಇದು ಅಷ್ಟೇ ಅಲ್ಲ. ಇದರಲ್ಲಿ ಹೆಣ್ಣೊಬ್ಬಳು, ಗಂಡೊಬ್ಬನನ್ನು ಮದುವೆಯಾಗಲಾರೆ, ಪ್ರೀತಿಸಲಾರೆ ಎಂದಿದ್ದಕ್ಕೆ ಆಗಿರುವ ಘಟನೆ. ಇದು ಗಂಡಸು ಮನಸ್ಥಿತಿಯ ದಬ್ಬಾಳಿಕೆ, ಕ್ರೌರ್ಯ. ಇಂತಹವು ಹತ್ತು ಹಲವು ರೂಪದಲ್ಲಿ ನಡೆಯುತ್ತಿವೆ. ಎಲ್ಲವೂ ಕೊಲೆಯಲ್ಲಿಯೇ ಕೊನೆಯಾಗದೇ ಇರಬಹುದು. ಆದರೆ, ಕಿರುಕುಳ, ಆಸಿಡ್‌ ದಾಳಿ, ಕೊಲೆ ಹೀಗೆ ವಿವಿಧ ರೂಪಗಳಲ್ಲಿ ತಲೆಯೆತ್ತುತ್ತದೆ. ಈ ಗಂಡಾಳ್ವಿಕೆಯ ದರ್ಪ, ಕ್ರೌರ್ಯ ಕೊನೆಯಾಗಲೇಬೇಕು. ಇದನ್ನೂ ನಾವು ಹೇಳಬೇಕು. ಅದನ್ನು ಸಾಕಷ್ಟು ಕಾಲದಿಂದ ಹೇಳುತ್ತಿರುವವರು ಪ್ರಗತಿಪರ, ಎಡಪಂಥೀಯ ಸಂಘಟನೆಗಳೇ. ನಮಗೆ ಇದರಲ್ಲಿ ಬೇಧವಿಲ್ಲ. ಏಕೆಂದರೆ ಪುರುಷ ಪ್ರಧಾನ ಮೌಲ್ಯಕ್ಕೆ/ಕ್ರೌರ್ಯಕ್ಕೆ ಧರ್ಮದ ಬೇಧವಿಲ್ಲ. ಸುಮಾರು 15 ವರ್ಷಗಳ ಹಿಂದೆ ಕರ್ನಾಟಕದಲ್ಲಿ ಸರಣಿ ಆಸಿಡ್‌ ದಾಳಿ ನಡೆಯುತ್ತಿತ್ತು. ಇದೇ ಕಾರಣಕ್ಕೆ. ಆಗ ಅದರ ವಿರುದ್ಧ ಪ್ರತಿಭಟಿಸಿದ್ದು, ಆಂದೋಲನ ರೂಪಿಸಿದ್ದು, ಕೋರ್ಟಿಗೆ ಹೋಗಿದ್ದು, ಪರಿಹಾರ ಕಂಡುಕೊಂಡಿದ್ದು – ಅಂತಹ ಕೃತ್ಯಗಳು ಕಡಿಮೆಯಾಗುವ ಹಾಗೆ ಮಾಡಿದ್ದು, ಎಡ ಮತ್ತು ಪ್ರಗತಿಪರ ಮಹಿಳಾ ಸಂಘಟನೆಗಳು. CSAAW (Campaign & Struggle against acid attacks on women) ವತಿಯಿಂದ. ನೆನಪಿರಲಿ, CSAAW ದಾಖಲಿಸಿ ಹೋರಾಡಿದ ಆಸಿಡ್‌ ದಾಳಿಗಳ ಪ್ರಕರಣಗಳ ಆರೋಪಿಗಳು ಮತ್ತು ಬಲಿಪಶುಗಳಲ್ಲಿ ಎಲ್ಲಾ ಧರ್ಮಕ್ಕೆ ಸೇರಿದವರು ಇದ್ದರು.
2. ಲೈಂಗಿಕ ದೌರ್ಜನ್ಯಗಳ ವಿವಿಧ ರೂಪಗಳು, ಎಳೆಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆಗಳಾಗುತ್ತಿರುವುದೂ ವಿಪರೀತವಾಗಿದೆ. ನಾಗರಿಕ ಸಮಾಜವೊಂದು ಸಹಿಸಿಕೊಳ್ಳಬಾರದ ಪ್ರಮಾಣದಲ್ಲಿ ನಡೆಯುತ್ತಿದೆ. ಇದರ ವಿರುದ್ಧವೂ ವಿವಿಧ ಮಹಿಳಾ ಸಂಘಟನೆಗಳು ಹೋರಾಡುತ್ತಿವೆ. ಲೈಂಗಿಕ ದೌರ್ಜನ್ಯ ಎಸಗುವ ಗಂಡು ಜಾತಿ/ಗಂಡು ಧರ್ಮದಲ್ಲಿನ ಹಲವರ ವಿಕೃತ ಮನಸ್ಸಿನ ವಿರುದ್ಧ. ಇದರಲ್ಲೂ ಜಾತಿ-ಧರ್ಮದ ಬೇಧವಿಲ್ಲ. ನೂರಾರು ಉದಾಹರಣೆಗಳನ್ನು ಕೊಡಬಹುದು. ಎಲ್ಲಾ ಜಾತಿಯ ಎಲ್ಲಾ ಧರ್ಮದ ಬಲಿಪಶುಗಳೂ ಎರಡೂ ಕಡೆ ಇದ್ದಾರೆನ್ನುವುದಕ್ಕೆ. ನಾವು ಹೋರಾಡಬೇಕಾದ್ದು, ಮಹಿಳೆಯನ್ನು, ಮಕ್ಕಳನ್ನು ಲೈಂಗಿಕ ಸರಕಿನಂತೆ ನೋಡುವ ಮನಸ್ಥಿತಿಯ ವಿರುದ್ಧ. ಇದಕ್ಕೆ ಪರಿಹಾರ ಕಂಡುಕೊಳ್ಳಲೇಬೇಕಿದೆ.
3. ಇತ್ತೀಚಿನ ಒಂದು ಘಟನೆಯನ್ನು ಇಲ್ಲಿ ನೆನಪಿಸಬೇಕಿದೆ. ಮಾರ್ಚ್‌ 31ರಂದು ತುಮಕೂರಿನಲ್ಲಿ ಒಂದು ಸುಟ್ಟು ಕರಕಲಾದ ಯುವತಿಯ ದೇಹ ಸಿಕ್ಕಿತು. ಆ ಯುವತಿಯನ್ನು ಕೊಂದು ಸುಟ್ಟವನ ಹೆಸರು ಪ್ರದೀಪ್.‌ ಯುವತಿಯ ಹೆಸರು ರುಕ್ಸಾನಾ. ಮದುವೆಯಾಗದೇ ಆಕೆ ಗರ್ಭಿಣಿಯೂ ಆಗಿ ಮಗುವೊಂದಕ್ಕೆ ತಾಯಿಯೂ ಆದ ಮೇಲೆ ಕಡೂರಿನ ಪ್ರದೀಪ್‌ ಬೆಂಗಳೂರಿಗೆ ಕರೆದುಕೊಂಡು ಬರುವ ದಾರಿಯಲ್ಲಿ ಆಕೆಯನ್ನು ಕೊಂದು, ಸುಟ್ಟು ಬೆಂಗಳೂರಿಗೆ ಹೋಗಿ ಮಗುವನ್ನು ತಳ್ಳುಗಾಡಿಯೊಂದರಲ್ಲಿ ಇಟ್ಟು ಹೋಗಿಬಿಟ್ಟಿದ್ದ. ಬಗಲಗುಂಟೆ ಪೊಲೀಸರ ಕೈಗೆ ಮಗು ಸಿಕ್ಕಿತು. ಪ್ರದೀಪನನ್ನು ಏಪ್ರಿಲ್‌ 14ರಂದು ಬಂಧಿಸಲಾಯಿತು.
4. ಇದೊಂದು ಸುದ್ದಿಯೂ ಆಗಲಿಲ್ಲ. 21 ವರ್ಷದ ರುಕ್ಸಾನಾ ಈ ರೀತಿ ಸುಟ್ಟು ಕರಕಲಾಗಿಬಿಟ್ಟಳು. ಈಗ ಇನ್ನೂ ಚಿಕ್ಕ ವಯಸ್ಸಿನ ನೇಹಾ ಇರಿತಕ್ಕೊಳಗಾಗಿ, ನೋವುಣ್ಣುತ್ತಾ ಆಸ್ಪತ್ರೆಗೆ ಹೋಗುವ ದಾರಿಯಲ್ಲೇ ಇಲ್ಲವಾಗಿದ್ದಾಳೆ. ಇಂತಹ ಪಾಪಿ ಸಮಾಜಕ್ಕೆ ಧಿಕ್ಕಾರವಿರಲಿ. ಇಂಥದ್ದನ್ನು ಕೊನೆಗೊಳಿಸಲು ನಾವೆಲ್ಲರೂ ಕೆಲಸ ಮಾಡೋಣ.
5. ರುಕ್ಸಾನಾ ಮುಸ್ಲಿಂ ಆಗಿದ್ದರಿಂದ ಬಿಜೆಪಿ ನಾಯಕರು ದನಿಯೆತ್ತಲಿಲ್ಲ ಎಂದುಕೊಳ್ಳಬೇಡಿ. ಕೊಂದವರು ಮತ್ತು ಕೊಲೆಗೀಡಾದವರು ಇಬ್ಬರೂ ಹಿಂದೂಗಳಾಗಿದ್ದಾಗಲೂ ಅವರು ದನಿಯೆತ್ತುವುದಿಲ್ಲ. ದಲಿತ ಹುಡುಗಿಯ ಕೊಲೆಯಾದಾಗ ಎಂದಾದರೂ ಅವರು ದನಿಯೆತ್ತಿದ್ದು ಇದೆಯೇ? ರುಕ್ಸಾನಾಳಿಗೆ ನ್ಯಾಯ ಸಿಗಲಿ; ನೇಹಾಳಿಗೆ ನ್ಯಾಯ ಸಿಗಲಿ. ಎಂದೂ ಯಾರಿಗೂ ಇಂತಹ ಸಾವುಗಳು, ನೋವುಗಳು ಬಾರದಿರಲಿ. ಅದೇ ನಮ್ಮ ಪ್ರಾಥಮಿಕ ಕರ್ತವ್ಯ.
6. ಇನ್ನು ಧರ್ಮ ಯಾವುದು ಚೆಕ್‌ ಮಾಡಿ ಸಾವಿನಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುವ ಕ್ರಿಮಿಗಳ ವಿಚಾರ. ಅವರಿಗೆ ಸ್ಪಷ್ಟವಾಗಿ ಹೇಳೋಣ. ನಿಮಗೆ ರುಕ್ಸಾನಾಳಾಗಲಿ, ನೇಹಾಳಾಗಲಿ ಸಂಬಂಧವಿಲ್ಲ. ನೀವು ಪ್ರದೀಪ್‌ ಮತ್ತು ಫಯಾಜ್‌ಗೆ ಸಂಬಂಧಿಸಿದವರು. ಈ ಸಾವಿನಿಂದ ನಿಮಗೆ ಬೇಸರವಾಗಿಲ್ಲ. ನೀವು ಸಂಭ್ರಮದಲ್ಲಿದ್ದೀರಿ. ಧಿಕ್ಕಾರವಿರಲಿ ನಿಮ್ಮ ದುಷ್ಟತನಕ್ಕೆ.
7. ಈ ಚುನಾವಣೆಯ ಹೊತ್ತಿನಲ್ಲೂ, ಚುನಾವಣೆಯ ನಂತರವೂ ಇಂತಹ ಕೃತ್ಯಗಳ ವಿರುದ್ಧ ನಾವು ಹೋರಾಡೋಣ. ಗಂಡು ಶ್ರೇಷ್ಠ, ಅವನ ಇಚ್ಛೆಗೆ ತಕ್ಕಂತೆ ಹೆಣ್ಣು ವರ್ತಿಸಬೇಕು ಎಂಬ ಮನಸ್ಥಿತಿ ಕೊನೆಗಾಣಲಿ.

ಮುಂಡರಗಿ ತಾಲೂಕು ಮಹಾ ಸುದ್ದಿ ವರದಿಗಾರರು A N Kelur

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282