FASTNEWS
MAY 22, 2024

ಜಾರ್ಜಿಯಾ: ಕಾರು ಅಪಘಾತದಲ್ಲಿ ಭಾರತ ಮೂಲದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಅಮೆರಿಕಾದ ಜಾರ್ಜಿಯಾದಲ್ಲಿ ನಡೆದಿದೆ.
ಈ ಅಪಘಾತದಲ್ಲಿ ಆರ್ಯನ್ ಜೋಶಿ ಹಾಗೂ ಶ್ರೀಯಾ ಅವಸರಲ ಎಂಬ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದರೆ, ಅನ್ವಿ ಶರ್ಮ ಎಂಬ ವಿದ್ಯಾರ್ಥಿಯು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಗಾಯಾಳುಗಳನ್ನು ರಿತ್ವಿಕ್ ಸೋಮೆಪಲ್ಲಿ ಹಾಗೂ ಮುಹಮ್ಮದ್ ಲಿಯಾಕತ್ ಎಂದು ಗುರುತಿಸಲಾಗಿದ್ದು, ಅವರಿಗೆ ಅಲ್ಫರೆಟ್ಟಾದಲ್ಲಿರುವ ನಾರ್ತ್ ಫುಲ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
18 ವರ್ಷ ವಯೋಮಾನದ ಈ ಎಲ್ಲ ಐವರು ವಿದ್ಯಾರ್ಥಿಗಳು ಅಲ್ಫರೆಟ್ಟಾ ಪ್ರೌಢ ಶಾಲೆ ಹಾಗೂ ಜಾರ್ಜಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದರು.
ಕಾರು ಚಾಲಕನು ನಿಯಂತ್ರಣ ಕಳೆದುಕೊಂಡಿದ್ದರಿಂದ ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ಬದಿಯ ಮರಗಳ ಸಾಲಿನ ಬಳಿ ಮಗುಚಿ ಬಿದ್ದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.