FASTNEWS
JUNE 28, 2024

ಮಂಗಳೂರು: ನಗರದ ಕಾವೂರು ಸೂಜಿಕಲ್ ಗುಡ್ಡೆ ಎಂಬಲ್ಲಿ ಭೂಕುಸಿತದಿಂದ ಕೆಲವು ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ತಕ್ಷಣವೇ ಅಲ್ಲಿನ ನಿವಾಸಿಗಳ ಸ್ಥಳಾಂತರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚಿಸಿದ್ದಾರೆ.
ಮಂಗಳೂರು ತಾಲೂಕಿನ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಮುಲ್ಲೈ ಮುಹಿಲನ್ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಕಾವೂರು ಸೂಜಿಕಲ್ ಗುಡ್ಡೆಯಲ್ಲಿ ಖಾಸಗಿ ಮನೆ ಕಟ್ಟಡ ನಿರ್ಮಿಸಲು ಅಗೆಯಲಾದ ಮಣ್ಣಿನಿಂದ ಎತ್ತರದ ಪ್ರದೇಶದಲ್ಲಿರುವ ಮನೆಗಳು ಕೆಳಗೆ ಬೀಳುವ ಸ್ಥಿತಿಯಲ್ಲಿವೆ. ಈ ನಿಟ್ಟಿನಲ್ಲಿ ಇಲ್ಲಿನ ನಿವಾಸಿಗಳನ್ನು ಬೇರೆಡೆ ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಲು ಮಂಗಳೂರು ಮಹಾನಗರಪಾಲಿಕೆ ಆಯುಕ್ತರಿಗೆ ಅವರು ನಿರ್ದೇಶಿಸಿದ್ದಾರೆ. ಅಲ್ಲದೇ, ಘಟನೆಗೆ ಕಾರಣರಾದ ಖಾಸಗಿ ಮನೆಯ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಲು ಸೂಚನೆ ನೀಡಿದ್ದಾರೆ.
ಬಳಿಕ ಕೆಂಜಾರು ಶ್ರೀ ದೇವಿ ಕಾಲೇಜು ಆವರಣದಲ್ಲಿ ಉಂಟಾದ ಭೂಕುಸಿತ, ಮರವೂರು ಅಂತೋನಿಕಟ್ಟೆ ಎಂಬಲ್ಲಿ ಕಾಂಕ್ರೀಟ್ ತಡೆಗೋಡೆ ಕುಸಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Share