
ಗದಗ: ಕರ್ನಾಟಕ ರಾಜ್ಯ ಘಟಕದ ವತಿಯಿಂದ ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ” ಎಂಬ ಧೈಯವಾಕ್ಯದಡಿ ರಾಜ್ಯವ್ಯಾಪಿ ಅಭಿಯಾನವನ್ನು 2024, ಸೆಪ್ಟೆಂಬರ್ 13 ರಿಂದ 22ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮುನ್ನಾ ಕಲ್ಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವಾದಿ ಮುಹಮ್ಮದ್(ಸ)ರ ಜೀವನ ಮತ್ತು ಸಂದೇಶವು ಸಾರ್ವಕಾಲಿಕ ಮತ್ತು ಸಾರ್ವತ್ರಿಕವಾದುದು. ಅವರ ಜೀವನ ಮತ್ತು ಸಾಧನೆಗಳು ಎಲ್ಲಾ ಧರ್ಮಗಳ ಜ್ಞಾನಿಗಳ ಮೆಚ್ಚುಗೆಯನ್ನೂ ಜಗತ್ತಿನಾದ್ಯಂತ ಜನಮನ್ನಣೆಯನ್ನೂ ಗಳಿಸಿರುತ್ತದೆ. ಅವರ ಮೇಲೆ ಅವತೀರ್ಣಗೊಂಡ ದೈವಿಕ ಗ್ರಂಥ ಪವಿತ್ರ ಕುರ್‌ಆನ್ ಮತ್ತು ಅವರ ಬೋಧನೆಗಳಾದ ಹದೀಸ್’ಗಳು ಅಧಿಕೃತವಾಗಿ ಸಂರಕ್ಷಿಸಲ್ಪಟ್ಟಿದ್ದು ಇಂದಿಗೂ ಅವು ಪ್ರಸ್ತುತವಾಗಿವೆ.
ಈ ಮಹಾನ್ ವ್ಯಕ್ತಿತ್ವದ ಸಂದೇಶ ಮತ್ತು ಬೋಧನೆಗಳನ್ನು ಸರ್ವಮಾನವ ಕುಲಕ್ಕೆ ಪ್ರಸ್ತುತವೆಂಬುದನ್ನು ಸಾರ್ವಜನಿಕರಿಗೆ ಪರಿಚಯಿಸುವ ಮತ್ತು ಜಾಗೃತಿ ಮೂಡಿಸುವ ಅಗತ್ಯವಿದೆ. ಮುಖ್ಯವಾಗಿ ಆನೈತಿಕತೆ, ದ್ವೇಷ, ಹಿಂಸೆ ಹಾಗೂ ಸ್ವಾರ್ಥಗಳು ಸಾಮಾನ್ಯವಾಗಿರುವ ಇಂದಿನ ವಾತಾವರಣದಲ್ಲಿನೈತಿಕತೆ, ಪ್ರೀತಿ, ವಿಶ್ವಾಸ ಮತ್ತು ಮಾನವೀಯತೆಯ ಸಂದೇಶವನ್ನು ಎತ್ತಿಹಿಡಿಯುವುದು ಅನಿವಾರ್ಯ ಬೇಡಿಕೆಯಾಗಿದೆ.
ಅಭಿಯಾನದ ಅಂಗವಾಗಿ ರಾಜ್ಯದ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರವಾದಿ ಮುಹಮ್ಮದರ ಬಗ್ಗೆ ಜಗತ್ತಿನ ಪ್ರಸಿದ್ಧ ದಾರ್ಶನಿಕರ ಅನಿಸಿಕೆಗಳು ಮತ್ತು ದೇಶನ ಹೆಸರಾಂತ ಬುದ್ದಿಜೀವಿಗಳು ಬರೆದಿರುವ ಲೇಖನ ಸಂಕಲನದ ಪುಸ್ತಕಗಳನ್ನು ಹೊರತರಲಾಗುವುದು. ರಾಜ್ಯಾದ್ಯಂತ ಬೃಹತ್ ಸಮ್ಮೇಳನಗಳು, ವಿಚಾರಗೋಷ್ಠಿಗಳು, ಸಂವಾದ ಕಾರ್ಯಕ್ರಗಳು, ಸಾಮಾಜಿಕ ಸೇವಾ ಕಾರ್ಯಗಳು ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರಬಂಧ ಸ್ಪರ್ಧೆ ಮತ್ತು ಕ್ವಿಝ್ ಸ್ಪರ್ಧೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸಮಾಜದಲ್ಲಿ ಪರಸ್ಪರ ಅಪನಂಬಿಕೆ, ದ್ವೇಷ, ಪೂರ್ವಾಗ್ರಹಗಳನ್ನು ಹೋಗಲಾಡಿಸಿ, ಶಾಂತಿ, ಸೌಹಾರ್ದತೆ ಮತ್ತು ಮಾನವೀಯತೆಯನ್ನು ಬೆಳೆಸುವುದೇ ಈ ಅಭಿಯಾನದ ಉದ್ದೇಶ. ಪರಸ್ಪರರನ್ನು ಅರಿಯುವ ಹೃದಯಗಳನ್ನು ಬೆಸೆಯುವ ಈ ಮಹತ್ಕಾರ್ಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನಾಡಿನ ಜನತೆಯ ಸಹಕಾರವನ್ನು ಕೋರುತ್ತದೆ.
Share