ವಕ್ಫ್ ಕಾಯ್ದೆ ತಿದ್ದುಪಡಿ ಬಳಿಕ ಮೊದಿ ಸರ್ಕಾರದ ಟಾರ್ಗೆಟ್ ಮದರಸಗಳು?
ಮಂಗಳೂರು : ರಾಜ್ಯದಲ್ಲಿರುವ ಎಲ್ಲಾ ಮದರಸಗಳ ಮಾಹಿತಿ ಸಂಗ್ರಹಿಸಿ ಸಲ್ಲಿಸುವಂತೆ ರಾಜ್ಯ ಗುಪ್ತಚರ ಇಲಾಖೆಯು ಪ್ರತಿ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಆಯುಕ್ತರು ಮತ್ತು ಪ್ರತಿ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದೆ. ಗುಪ್ತಚರ ಇಲಾಖೆಯ ಸೂಚನೆಯ ಹಿನ್ನೆಲೆಯಲ್ಲಿ ಕರ್ನಾಟಕದ ಪೊಲೀಸರು ಗುಪ್ತವಾಗಿ ಮದರಸಗಳ ಮಾಹಿತಿ ಸಂಗ್ರಹಿಸಲು ಮುಂದಾಗಿರುವುದು ತಿಳಿದುಬಂದಿದೆ.
ಕೇಂದ್ರ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮದರಸಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಪೊಲೀಸ್ ಮಹಾ ನಿರ್ದೇಶಕರು ಗುಪ್ತಚರ ಇಲಾಖೆಗೆ ಸೂಚನೆ ನೀಡಿದ್ದರು. ಬಳಿಕ ರಾಜ್ಯ ಗುಪ್ತಚರ ಇಲಾಖೆಯ ನಿರ್ದೇಶಕರು ಪ್ರತಿ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮದರಸಗಳ ಮಾಹಿತಿ ಸಂಗ್ರಹಿಸುವಂತೆ ಸೂಚನೆ ನೀಡಿದ್ದಾರೆ. ಗುಪ್ತಚರ ಇಲಾಖೆಯ ಆದೇಶದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ತನ್ನ ವ್ಯಾಪ್ತಿಯಲ್ಲಿರುವ ಮದರಸಗಳ ಮಾಹಿತಿ ಸಂಗ್ರಹಿಸುವಂತೆ ಪ್ರತಿ ಪೊಲೀಸ್ ಠಾಣೆಗಳಿಗೆ ಸೂಚನೆ ಕೊಟ್ಟಿದ್ದಾರೆ. ಅದರ ಪ್ರತಿಗಳು ಪ್ರಸ್ತುತ ನ್ಯೂಸ್’ಗೆ ಲಭ್ಯವಾಗಿದೆ.
2023ರಲ್ಲಿ ನಡೆದಿದ್ದ ಡಿಜಿಪಿ ಮತ್ತು ಐಜಿಪಿಗಳ ಸಮ್ಮೇಳನದ ಶಿಫಾರಸ್ಸಿನ ಅನ್ವಯ ಕೇಂದ್ರ ಸರ್ಕಾರದ ಗುಪ್ತದಳದ ಜಂಟಿ ನಿರ್ದೇಶಕರು 26/04/2023 ಮತ್ತು 06/03/2024ರಲ್ಲಿ ಎರಡು ಬಾರಿ ಮದರಸಗಳ ವಿವರ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಮದರಸಗಳ ಮಾಹಿತಿ ಸಂಗ್ರಹಿಸುವಂತೆ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು 21/10/2024ರಂದು ರಾಜ್ಯ ಗುಪ್ತದಳದ ನಿರ್ದೇಶಕರಿಗೆ ಸೂಚಿಸಿದ್ದರು.
Share