ಬೆಂಗಳೂರು: ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿ ನಂತರ ನಾಮಪತ್ರ ವಾಪಸ್ ಪಡೆದಿದ್ದ ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಎಸ್.ಖಾದ್ರಿ ಅವರಿಗೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮದ (ಹೆಸ್ಕಾಂ) ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಬಂಪರ್ ಗಿಫ್ಟ್ ನೀಡಿದ್ದಾರೆ. ಪ್ರಸ್ತುತ ಹೆಸ್ಕಾಂಗೆ ಇಂಧನ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರು ಗೌರವ್ ಗುಪ್ತಾ ಅವರು ಅಧ್ಯಕ್ಷರಾಗಿದ್ದರು. ಇವರ ಬದಲಿಗೆ ಸೈಯದ್ ಅಜ್ಜಂಪೀರ್.ಎಸ್.ಖಾದ್ರಿ ಅವರನ್ನು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಖಾದ್ರಿ ಅವರು, ಸಿಎಂ ಸಿದ್ದರಾಮಯ್ಯ ಮನವಿ ಮೇರೆಗೆ ನಾಮಪತ್ರ ಹಿಂತೆಗೆದುಕೊಂಡಿದ್ದರು. ತಮ್ಮ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ವಾಪಸ್ ಪಡೆದುಕೊಂಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ, ಖಾದ್ರಿ ಅವರಿಗೆ ಹೆಸ್ಕಾಂ ಅಧ್ಯಕ್ಷ ಹುದ್ದೆ ಕೊಟ್ಟಿದ್ದಾರೆ.
Share