ಇನಾಯತ್ ಅಲಿ ಖದರ್, ಮೂರಕ್ಕೆ ಮೂರು ವಾರ್ಡ್‌ಗಳು ‘ಕೈ’ವಶ, ಬಿಜೆಪಿಗೆ ಮುಖಭಂಗ ಮಂಗಳೂರು : ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಕ್ಷೇತ್ರದ ಗಂಜಿಮಠ, ನೀರುಮಾರ್ಗ ಮತ್ತು ಅಡ್ಯಾರ್ ಪಂಚಾಯತ್ ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರು ವಾರ್ಡ್‌ಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಜಯಗಳಿಸುವ ಮೂಲಕ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿದೆ. ಗಂಜಿಮಠ ಪಂಚಾಯತ್‌ನ ಬಿಜೆಪಿ ಭದ್ರಕೋಟೆ ಎಂದು ಕರೆಸಿಕೊಳ್ಳುತ್ತಿದ್ದ ಮಳಲಿ ಮೊಗರು ವಾರ್ಡ್‌ನಲ್ಲೇ ಕಾಂಗ್ರೆಸ್ ಗೆದ್ದಿದೆ. ಕಳೆದ ಮೂವತ್ತು ವರ್ಷಗಳಿಂದ ಈ ವಾರ್ಡ್ ಬಿಜೆಪಿ ಹಿಡಿತದಲ್ಲಿತ್ತು. ಬಿಜೆಪಿಯ ಭದ್ರಕೋಟೆಯಾಗಿದ್ದ ಈ ಮಳಲಿ ಮೊಗರು ವಾರ್ಡ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುನಿಲ್ 50 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ನೀರು ಮಾರ್ಗ ಪಂಚಾಯತ್‌ನ ಬೊಂಡಂತಿಲ ವಾರ್ಡ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಶ್ರಫ್ 86 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಅಡ್ಯಾರ್ ಪಂಚಾಯತ್‌ನ ಅಡ್ಯಾರ್ ಪದವು ವಾರ್ಡ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೌರವ್ ಶೆಟ್ಟಿ 175 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶದಿಂದ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿಗೆ ಮುಖಭಂಗವಾಗಿದೆ. ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಮನೆಮನೆಗೆ ತೆರಳಿ ಮತಯಾಚಣೆ ಮಾಡಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಬಿಜೆಪಿ ಕಳೆದ ಮೂವತ್ತು ವರ್ಷಗಳಿಂದ ಗೆದ್ದಿರುವ ವಾರ್ಡ್ ಸೇರಿದಂತೆ ಮೂರಕ್ಕೆ ಮೂರು ವಾರ್ಡ್‌ಗಳನ್ನು ಗೆಲ್ಲಿಸುವ ಮೂಲಕ ಇನಾಯತ್ ಅಲಿ ಮತ್ತೊಮ್ಮೆ ತಮ್ಮ ಖದರ್ ತೋರಿಸಿದ್ದಾರೆ.
Share