ವಾಷಿಂಗ್ಟನ್: ಅಕ್ರಮವಾಗಿ ಗನ್ ಇಟ್ಟುಕೊಂಡಿದ್ದ ಮತ್ತು ತೆರಿಗೆ ನಿಯಮ ಉಲ್ಲಂಘನೆಯಲ್ಲಿ ಶಿಕ್ಷೆಗೆ ಗುರಿಯಾಗಿದ್ದ ತಮ್ಮ ಮಗ ಹಂಟರ್ ಬೈಡನ್ ಗೆ ಕ್ಷಮಾದಾನ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ನಿರ್ಧಾರವನ್ನು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ತೀವ್ರವಾಗಿ ಖಂಡಿಸಿದ್ದು, ಇದು ನ್ಯಾಯದ ಕೊಲೆ ಎಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತಂತೆ ಪೋಸ್ಟ್ ಹಂಚಿಕೊಂಡಿರುವ ಅವರು, ಹಂಟರ್‌ಗೆ ಜೋ ಬೈಡನ್ ನೀಡಿರುವ ಕ್ಷಮಾದಾನವು ಜೆ6 ಒತ್ತೆಯಾಳುಗಳಿಗೂ ಅನ್ವಯಿಸುತ್ತದೆಯೇ? ಇದೊಂದು ಕಾನೂನಿನ ದುರ್ಬಳಕೆ ಮತ್ತು ನ್ಯಾಯದ ಗರ್ಭಪಾತ ಎಂದಿದ್ದಾರೆ. 2021ರ ಜನವರಿ 6ರಂದು ಜೋ ಬೈಡನ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಕ್ಯಾಪಿಟಲ್ ಹಿಲ್‌ಗೆ ನುಗ್ಗಿ ಗಲಭೆ ನಡೆಸಿದ್ದಕ್ಕಾಗಿ ಜೈಲಿನಲ್ಲಿರುವ ಬೆಂಬಲಿಗರನ್ನು ಟ್ರಂಪ್ ಬಳಗವು ‘ಜೆ6 ಒತ್ತೆಯಾಳುಗಳು’ಎಂದು ಹೇಳುತ್ತದೆ. ಜೈಲಿನಲ್ಲಿರುವ ಆಪಾದಿತರು ಶಾಂತಿಯುತವಾಗಿ ಮತ್ತು ದೇಶಭಕ್ತಿಯಿಂದ ವರ್ತಿಸಿದ್ದರು ಎಂದು ಟ್ರಂಪ್ ಮತ್ತು ಅವರ ಬೆಂಬಲಿಗರು ಹೇಳುತ್ತಾರೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಕ್ಯಾಪಿಟಲ್ ಹಿಲ್ ಮೇಲಿನ ದಾಳಿ ಆರೋಪದಡಿ ಜೈಲು ಪಾಲಾಗಿರುವವರಿಗೆ ಕ್ಷಮಾದಾನ ನೀಡಲಿದ್ದಾರೆ ಎಂಬ ವದಂತಿ ಇದೆ.
Share