ಚೆನ್ನೈ: ನಟ ವಿಜಯ್ ದಳಪತಿ ಇತ್ತೀಚೆಗೆ ಸ್ಥಾಪಿಸಿರುವ ತಮಿಳಿಗ ವೆಟ್ರಿ ಕಳಿಗಂ ಪಕ್ಷದ ಕುರಿತಂತೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ. ಬ್ರಿಟನ್ ನಲ್ಲಿ ಮೂರು ತಿಂಗಳ ಅವಧಿಯ ಫೆಲೋಶಿಪ್ ಪೂರ್ಣಗೊಳಿಸಿ ಮರಳಿರುವ ಮಾಜಿ ಐಪಿಎಸ್ ಅಧಿಕಾರಿ, ಕೊಯಮತ್ತೂರಿನಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಮಾತನಾಡಿದರು. ಟಿವಿಕೆ ಪಕ್ಷದ ಸೈದ್ಧಾಂತಿಕ ನಿಲುವನ್ನು ‘ಕಿಚಡಿ ರಾಜಕಾರಣ’ ಎಂದು ಲೇವಡಿ ಮಾಡಿದರು. “ಈ ಸಿದ್ಧಾಂತದಿಂದ ಕೆಲವೊಂದನ್ನು ತೆಗೆದುಕೊಳ್ಳಿ, ಮತ್ತೊಂದು ಸಿದ್ಧಾಂತದಿಂದ ಇನ್ನೊಂದಿಷ್ಟು ತೆಗೆದುಕೊಳ್ಳಿ! ಈ ನಾಯಕನ ಫೋಟೋ ಮತ್ತು ಆ ನಾಯಕನ ಫೋಟೋ. ಹತ್ತು ನಾಯಕರ ಫೋಟೋಗಳನ್ನು ಹಾಕಿಬಿಟ್ಟರೆ ತಮ್ಮನ್ನು ಯಾರು ಟೀಕಿಸಲಾರರು ಎಂದು ಕೆಲವು ರಾಜಕೀಯ ಪಕ್ಷಗಳು ಭಾವಿಸಿವೆ. ಅನ್ನ ರಸಂ, ಮೊಸರನ್ನ ಮತ್ತು ಸಾಂಬಾರ್ ಅನ್ನವನ್ನು ಮಿಶ್ರಣ ಮಾಡಿ ಹೇಗೆ ತಾನೆ ಹೊಸ ಖಾದ್ಯ ಎಂದು ಕರೆಯಲು ಸಾಧ್ಯ? ಇದನ್ನು ಒಂದೋ ಅನ್ನ ರಸಂ, ಮೊಸರನ್ನ ಅಥವಾ ಅನ್ನ ಸಾಂಬಾರ್ ಎಂದು ಕರೆಯಿರಿ. ನೀವು ಈ ಎಲ್ಲ ಮೂರನ್ನೂ ಮಿಕ್ಸ್ ಮಾಡಿದರೆ ಜನರು ತಿನ್ನುವುದಿಲ್ಲ. ಅಂತಹ ರಾಜಕೀಯ ಜಗತ್ತಿನಲ್ಲಿ ಎಲ್ಲಿಯೂ ಗೆದ್ದಿಲ್ಲ” ಎಂದು ಅಣ್ಣಾಮಲೈ ಹೇಳಿದಾಗ ಸಭಾಂಗಣದಲ್ಲಿ ನಗುವಿನ ಅಲೆ ಎದ್ದಿತು.
Share