ಮಂಗಳೂರು: ಫೆಂಗಲ್ ಚಂಡಮಾರುತ ತಮಿಳುನಾಡಿನ ಕರಾವಳಿಗೆ ಅಪ್ಪಳಿಸಿದ ಪರಿಣಾಮ ಕರ್ನಾಟಕದ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮಂಗಳೂರಿನ ಹಲವು ರಸ್ತೆಗಳು ಮುಳುಗಡೆಯಾಗಿದೆ. ಕೊಟ್ಟಾರ ಚೌಕಿ, ಕುದ್ರೋಳಿ ಸೇರಿ ಅನೇಕ ಭಾಗದಲ್ಲಿ ನೀರು ರಸ್ತೆಗೆ ನುಗ್ಗಿದೆ. ಅಲ್ಲದೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ದ.ಕ ಜಿಲ್ಲಾಡಳಿತ ಹೊರಡಿಸಿದೆ. ಸಂಭವನೀಯ ನೆರೆಹಾವಳಿ, ಭೂಕುಸಿತ, ತೋಡುಗಳು, ಕಾಲುಸಂಕ, ಮತ್ತು ವಿದ್ಯುತ್‌ತಂತಿಗಳಿಂದ ಹಾಗೂ ಇನ್ನಿತರೆ ಮೂಲಗಳಿಂದ ವಿಪತ್ತು ಸಂಭವಿಸುವ ಪ್ರದೇಶಗಳನ್ನು ಗುರುತಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಸಂಭವನೀಯ ವಿಪತ್ತು ಪ್ರದೇಶಗಳಿಗೆ ಸಾರ್ವಜನಿಕರು ತೆರಳದಂತೆ ಎಚ್ಚರಿಕೆಯನ್ನು ನೀಡುವ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮವಹಿಸುವುದು. ಗುಡ್ಡಗಾಡು ಪ್ರದೇಶದಲ್ಲಿರುವ ಶಿಥಿಲಗೊಂಡಿರುವ/ ಆವರಣಗೋಡೆಗೆ ತಾಗಿಕೊಂಡಿರುವಂತಹ ಅಪಾಯಕಾರಿ ಮನೆಗಳನ್ನು, ಅಂಗನವಾಡಿಗಳು, ಶಾಲೆಗಳು, ತೋಡುಗಳು, ಸಂಕಗಳನ್ನು ಗುರುತಿಸಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವುದು. ತಮ್ಮ ವ್ಯಾಪ್ತಿಯಲ್ಲಿ ಬರುವ ಚರಂಡಿ/ರಾಜಕಾಲುವೆ/ತೋಡುಗಳ ಹೂಳೆತ್ತಿಸುವ ಮತ್ತು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸಂಗ್ರಹವಾಗುವ ಮಣ್ಣನ್ನು ತಕ್ಷಣವೇ ತೆರವುಗೊಳಿಸಲು ಹಾಗೂ ಮಳೆ ನೀರು ಸರಾಗವಾಗಿ ಹರಿದು ಹೋಗಲು ಕ್ರಮವಹಿಸುತ್ತಾ, ಕೃತಕ ನೆರೆಉಂಟಾಗಿ ಜನಜೀವನ ಅಸ್ತವ್ಯಸ್ತವಾಗುವುದನ್ನು ತಡೆಗಟ್ಟಲು ಕ್ರಮಕೈಗೊಳ್ಳುವುದು. ಎಲ್ಲಾ Incident Commander ಗಳು ಈಗಾಗಲೇ ಅಭಿವೃದ್ಧಿಪಡಿಸಲಾದ Disaster Management Response Application ನ್ನು ಕಡ್ಡಾಯವಾಗಿ install ಮಾಡಿಕೊಂಡು, ಆಪ್ ನಲ್ಲಿ ಬರುವಂತಹ ದೂರುಗಳ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಂಡು, ವರದಿಯನ್ನು ಅಪ್ ನಲ್ಲಿ ಅಪ್ ಲೋಡ್ ಮಾಡುವುದು. ಕಿಂಡಿ ಅಣೆಕಟ್ಟುಗಳನ್ನು ಸಣ್ಣ ನೀರಾವರಿ ಇಲಾಖೆಯ ಸಮನ್ವಯತೆಯಿಂದ ಪರಿಶೀಲಿಸಿ, ಗೇಟ್ ಗಳಲ್ಲಿ ಸಿಲುಕಿಗೊಂಡಿರುವ ಮರದ ದಿಮ್ಮಿ, ಇತರ ತ್ಯಾಜ್ಯಗಳನ್ನು ತೆರವುಗೊಳಿಸಲು ಹಾಗೂ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲು ಹಾಗೂ ನದಿ ತೀರದ ಪ್ರದೇಶಗಳಲ್ಲಿ ಸಂಭಾವ್ಯ ವಿಪತ್ತು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು. ಎಲ್ಲಾ ತಾಲೂಕುಗಳಲ್ಲಿ ನಿಯಂತ್ರಣ ಕೊಠಡಿಗಳನ್ನು 24*7 ಕಾರ್ಯಾಚರಣೆಯಲ್ಲಿರುವ ಬಗ್ಗೆ ಆಯಾ ತಾಲೂಕು ತಹಶೀಲ್ದಾರರು ಖಚಿತಪಡಿಸಿಕೊಂಡು, ಕಂದಾಯ, ಪೊಲೀಸ್, ಅಗ್ನಿಶಾಮಕ ಇಲಾಖೆ, ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳು, ಲೋಕೋಪಯೋಗಿ ಇಲಾಖೆ, ಮೆಸ್ಕಾಂ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ರಾಷ್ಟ್ರೀಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ವಿಪತ್ತು ನಿರ್ವಹಣೆಯಲ್ಲಿ ಕಾರ್ಯಪ್ರವೃತ್ತರಾಗಲು ಸೂಚಿಸಿದೆ. ಜಿಲ್ಲೆಯಾದ್ಯಂತ ಇರುವ ಜಲಪಾತ, ನದಿ, ಸಮುದ್ರ, ಜಿಲಾಶಯ ಪ್ರದೇಶಗಳಲ್ಲಿ ಸಾರ್ವಜನಿಕರು/ ಪ್ರವಾಸಿಗರು ನೀರಿನಲ್ಲಿ ಇಳಿಯುವುದು, ಈಜುವುದು, ಸಾಹಸ ಚಟುವಟಿಕೆಗಳನ್ನು ನಡೆಸುವುದನ್ನು ಡಿಸೆಂಬರ್ 04, 2024 ರವರೆಗೆ ನಿರ್ಬಂಧಿಸಿದೆ.
Share