0Shares
Post Views: 42
ಬೆಂಗಳೂರು: ತಮಿಳುನಾಡು ಹಾಗೂ ಪುದುಚೇರಿಯಲ್ಲಿ ತಲ್ಲಣ ಸೃಷ್ಟಿಸಿದ್ದ ಫೆಂಗಲ್ ಚಂಡಮಾರುತ ಇದೀಗ ಕರ್ನಾಟಕದ ಬಾಗಿಲಿಗೂ ಬಂದಿದೆ. ಸೈಕ್ಲೋನ್ ಪರಿಣಾಮ ಕಳೆದೆರಡು ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ ಇವತ್ತು ಮತ್ತಷ್ಟು ಜೋರಾಗುವ ಸಾಧ್ಯತೆಯಿದೆ. ಅರಬ್ಬೀ ಸಮುದ್ರದತ್ತ ಹೊರಟಿರುವ ಫೆಂಗಲ್ ಚಂಡಮಾರುತ ಈಗ ಕರ್ನಾಟಕದಲ್ಲೂ ಕಂಪನ ಸೃಷ್ಟಿಸಿದೆ. ಕರ್ನಾಟಕದ ಕರಾವಳಿ ಮತ್ತು ದಕ್ಷಿಣದ ರಾಜ್ಯಗಳಲ್ಲಿ ಅಬ್ಬರಿಸುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿರುವ ಕಾರಣ ಕರ್ನಾಟಕದ 10 ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಇಂದು ಶಾಲೆಗಳಿಗೆ ರಜೆ ನೀಡಲಾಗಿದೆ. ಸಚಿವರ ಕಾರ್ಯಕ್ರಮಗಳು ರದ್ದು ಫೆಂಗಲ್ ಚಂಡಮಾರುತ ಪರಿಣಾಮದಿಂದಾಗಿ ಇವತ್ತು ಮಂಗಳೂರಿನ ಪುರವನದಲ್ಲಿ ನಡೆಯಬೇಕಿದ್ದ ಬಹುಸಂಸ್ಕೃತಿ ಉತ್ಸವವನ್ನು ಮುಂದೂಡಲಾಗಿದೆ. ಹೀಗಾಗಿ, ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ಮತ್ತು ಸಚಿವ ಶಿವರಾಜ್ ತಂಗಡಗಿ ಪ್ರವಾಸ ರದ್ದಾಗಿದೆ. ಸೋಮವಾರ ಮಂಗಳೂರಿನ ಕೊಟ್ಟಾರ ಚೌಕಿ, ತಲಪಾಡಿ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿತ್ತು. ಇನ್ನು ಜಿಲ್ಲಾಪಂಚಾಯ್ತಿ ಸಂಭಾಗಣಕ್ಕೂ ಮಳೆ ನೀರು ನುಗ್ಗಿತ್ತು. ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಸಭೆ ನಡೆಸುತ್ತಿರುವಾಗಲೇ ಸಭಾಂಗಣಕ್ಕೆ ಮಳೆ ನೀರು ನುಗ್ಗಿತ್ತು.
0Shares