0Shares
Post Views: 26
ಬೆಂಗಳೂರು: ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜೀನಾಮೆಗೆ ಒತ್ತಾಯಿಸುತ್ತಿರುವ ತಮ್ಮ ಸಂಪುಟ ಸಹೋದ್ಯೋಗಿ ಪ್ರಿಯಾಂಕ್ ಖರ್ಗೆ ಅವರನ್ನು ಗೃಹ ಸಚಿವ ಜಿ ಪರಮೇಶ್ವರ ಸಮರ್ಥಿಸಿಕೊಂಡಿದ್ದು, ಸಿಐಡಿ ತನಿಖೆಯಿಂದ ಸತ್ಯ ಹೊರಬೀಳಲಿದೆ ಎಂದು ಮಂಗಳವಾರ ಹೇಳಿದ್ದಾರೆ. ಗುತ್ತಿಗೆದಾರರು ಪ್ರಿಯಾಂಕ್ ಖರ್ಗೆ ಅವರ ಆಪ್ತರೊಬ್ಬರ ವಿರುದ್ಧ ಆರೋಪ ಮಾಡಿರುವ ಏಳು ಪುಟಗಳ ಡೆತ್ ನೋಟ್ ದೊರಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿರುವ ಬಿಜೆಪಿ, ಜನವರಿ 4ರೊಳಗೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಇಲ್ಲವಾದರೆ, ಕಲಬುರಗಿಯಲ್ಲಿ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದೆ. ‘ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ, ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಡೆತ್ ನೋಟ್ ನಲ್ಲಿ ತಮ್ಮ ಹೆಸರಿಲ್ಲ ಎಂದು ಸ್ವತಃ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಬಿಜೆಪಿಯವರು ಅವರನ್ನು ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ನೇರವಾಗಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಯಾವುದೇ ಸಾಕ್ಷ್ಯವಿಲ್ಲದೆ ಅನಗತ್ಯವಾಗಿ ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ’ ಎಂದು ಪರಮೇಶ್ವರ ಅವರು ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಈ ಮಟ್ಟಕ್ಕೆ ಇಳಿಯಬಾರದು. ಈ ಹಿಂದೆ ತಾವೂ ಸಹ ಕೇಂದ್ರದಲ್ಲಿ ಸರ್ಕಾರ ನಡೆಸಿದ್ದೇವೆ. ಸರ್ಕಾರ ನಡೆಸುವಾಗ ನಾವೆಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತೇವೆ. ಪ್ರಿಯಾಂಕ್ ಖರ್ಗೆ ಕೂಡ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಲಾಗುತ್ತಿದೆ. ಯಾವುದೇ ಪೂರಕ ಸಾಕ್ಷ್ಯಗಳಿದ್ದರೆ ನಾವು ಸ್ವೀಕರಿಸುತ್ತೇವೆ ಎಂದು ಅವರು ಹೇಳಿದರು. ಆರೋಪಿ ರಾಜು ಕಪನೂರನನ್ನು ಪೊಲೀಸರು ಇನ್ನೂ ಬಂಧಿಸದಿರುವ ಕುರಿತು ಕೇಳಿದ ಪ್ರಶ್ನೆಗೆ, ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. ಅನಾವಶ್ಯಕವಾಗಿ ಆರೋಪ ಮಾಡುವುದು ಸರಿಯಲ್ಲ, ಸಿಐಡಿ ತನಿಖೆಯಾಗಲಿ, ಸತ್ಯಾಂಶ ಹೊರಬೀಳಲಿದೆ. ಹಣಕಾಸು ವ್ಯವಹಾರ ನಡೆದಿದೆಯೇ ಅಥವಾ ಇತರೆ ವಿಷಯಗಳು ವಿಚಾರಣೆಯಿಂದ ಗೊತ್ತಾಗಲಿದೆ ಎಂದರು.
0Shares