ಕೇಜ್ರಿವಾಲ್ ನವದೆಹಲಿ: ‘ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪಂಜಾಬ್ ನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ರೈತರಿಗೆ ಏನಾದರೂ ಸಂಭವಿಸಿದರೆ ಅದಕ್ಕೆ ಬಿಜೆಪಿಯೇ ಹೊಣೆಯಾಗಲಿದೆ’ ಎಂದು ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ‘ರದ್ದಾಗಿರುವ ಮೂರು ಕೃಷಿ ಕಾಯ್ದೆಗಳನ್ನು ‘ನೀತಿ’ ಹೆಸರಿನಲ್ಲಿ ಹಿಂಬಾಗಿಲ ಮೂಲಕ ಮತ್ತೆ ಜಾರಿಗೆ ತರಲು ಕೇಂದ್ರ ಸರ್ಕಾರ ಸಿದ್ದತೆ ನಡೆಸುತ್ತಿದ್ದು, ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಎಲ್ಲಾ ರಾಜ್ಯಗಳಿಗೆ ಹೊಸ ನೀತಿಯ ಪ್ರತಿಗಳನ್ನು ಕಳುಹಿಸಿಕೊಟ್ಟಿದೆ’ ಎಂದು ಆರೋಪಿಸಿದ್ದಾರೆ. ‘ಪಂಜಾಬ್‌ನಲ್ಲಿ ರೈತರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೆ, ಅಹಂಕಾರದಿಂದ ಬಿಜೆಪಿಯು ಅವರೊಂದಿಗೆ ಮಾತುಕತೆ ನಡೆಸುತ್ತಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮೂರು ವರ್ಷಗಳ ಹಿಂದೆ ರೈತರ ಬೇಡಿಕೆಗಳನ್ನು ಒಪ್ಪಿಕೊಂಡಿತ್ತು, ಆದರೆ ಈಗ ಅದನ್ನು ತಿರಸ್ಕರಿಸಿದೆ’ ಎಂದು ಕೇಜ್ರಿವಾಲ್ ಕಿಡಿಕಾರಿದ್ದಾರೆ. ‘ಯಾರೊಂದಿಗೂ ಮಾತನಾಡದಂತಹ ದುರಂಹಕಾರ ಬಿಜೆಪಿಗೆ ಏಕೆ’ ಎಂದು ಪ್ರಶ್ನಿಸಿದ್ದಾರೆ.
Share