0Shares
Post Views: 66
ನವದೆಹಲಿ: ಯುವಕನೋರ್ವ ತಾನೊಬ್ಬ ವಿದೇಶಿ ಮಾಡೆಲ್ ಎಂದು ಹೇಳಿಕೊಂಡು ಬರೊಬ್ಬರಿ 700ಕ್ಕೂ ಹೆಚ್ಚು ಯುವತಿಯರು ಮತ್ತು ಮಹಿಳೆಯರಿಗೆ ವಚಿಸಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ. ಪೂರ್ವ ದೆಹಲಿ ನಿವಾಸಿ 23 ವರ್ಷದ ತುಷಾರ್ ಸಿಂಗ್ ಬಿಷ್ತ್ ಎಂಬ ಯುವಕ ತನ್ನನ್ನು ತಾನು ಅಮೆರಿಕದ ಮಾಡೆಲ್ ಎಂದು ಹೇಳಿಕೊಂಡು ಭಾರತದ ಬರೊಬ್ಬರಿ 700ಕ್ಕೂ ಅಧಿಕ ಮಹಿಳೆಯರು ಮತ್ತು ಯುವತಿಯರಿಗೆ ವಂಚಿಸಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ ಈತ ಖ್ಯಾತ ಡೇಟಿಂಗ್ ಅಪ್ಲಿಕೇಶನ್ ಗಳು ಮತ್ತು ವರ್ಚುವಲ್ ಮೊಬೈಲ್ ಸಂಖ್ಯೆಗಳ ಸಹಾಯದಿಂದ 700ಕ್ಕೂ ಅಧಿಕ ಹುಡುಗಿಯರು ಮತ್ತು ಮಹಿಳೆಯರನ್ನು ಬಲೆಗೆ ಬೀಳಿಸಿಕೊಂಡು ಅವರಿಗೆ ವಂಚಿಸಿದ್ದಾನೆ. ಆರೋಪಿಯು ತಾನು ವಿದೇಶಿ ಫ್ರೀಲಾನ್ಸ್ ಮಾಡೆಲ್ ಎಂದು ಬರೆದುಕೊಂಡು ನಕಲಿ ಐಡಿ ಸೃಷ್ಟಿಸಿಕೊಂಡಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿಕೊಂಡು ಅದಕ್ಕೆ ಬ್ರೆಜಿಲ್ ಮೂಲದ ಮಾಡೆಲ್ ಓರ್ವನ ಫೋಟೋಗಳನ್ನು ಪ್ರೊಫೈಲ್ ಫೋಟವಾಗಿ ಹಾಕಿ ಹುಡುಗಿಯರು ಮತ್ತು ಯುವತಿಯರನ್ನು ವಂಚಿಸುತ್ತಿದ್ದ. ಮೊದಲು ಸಾಮಾಜಿಕ ಜಾಲತಾಣಗಳು ಮತ್ತು ಡೇಟಿಂಗ್ ಆ್ಯಪ್ ಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರ ಸ್ನೇಹ ಬೆಳೆಸುತ್ತಿದ್ದ. ತಾನು ಪ್ರಾಜೆಕ್ಟ್ ಗಾಗಿ ಭಾರತಕ್ಕೆ ಬಂದಿದ್ದೇನೆ.ಶೀಘ್ರದಲ್ಲೇ ಸ್ವದೇಶಕ್ಕೆ ಮರಳುತ್ತೇನೆ. ನೀವು ಸುಂದರವಾಗಿದ್ದೀರಿ.. ನಿಮ್ಮನ್ನು ಮದುವೆಯಾಗುತ್ತೇನೆ ಎಂದು ಹೇಳಿ ಈತ ಕ್ರಮೇಣ ಅವರೊಂದಿಗೆ ಆತ್ಮೀಯ ಸಲುಗೆ ಬೆಳೆಸಿಕೊಂಡು ಅವರಿಂದ ಅವರ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ತನಗೆ ಕಳುಹಿಸುವಂತೆ ಕೇಳುತ್ತಿದ್ದ. ಆತನನ್ನು ನಂಬಿದ ಯುವತಿಯರು ಮತ್ತು ಮಹಿಳೆಯರು ಆತನಿಗೆ ವಿಡಿಯೋ ಮತ್ತು ಫೋಟೋ ಕಳುಹಿಸಿದರೆ ಅದನ್ನೇ ಇಟ್ಟುಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಅವರಿಂದ ಸಾಧ್ಯವಾದಷ್ಟೂ ಹಣ ಪೀಕುತ್ತಿದ್ದ ಎನ್ನಲಾಗಿದೆ. ಡಿಸೆಂಬರ್ 13, 2024 ರಂದು ಪಶ್ಚಿಮ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ದೆಹಲಿ ವಿಶ್ವವಿದ್ಯಾಲಯದ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ದೂರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ.
Show less
0Shares