ನವದೆಹಲಿ: ಭಾರತೀಯ ಮೂಲದ ವ್ಯಕ್ತಿಯೊಬ್ಬರು ಜಗತ್ತಿನಲ್ಲೇ ಅತಿ ಹೆಚ್ಚು ಆದಾಯ ಗಳಿಸುವ ಟೆಕಿ ಎಂದು ಸುದ್ದಿಯಾಗುತ್ತಿದ್ದಾರೆ. ಅಮೆರಿಕದ ಕ್ವಾಂಟಮ್ ಸ್ಕೇಪ್ ಎನ್ನುವ ವಿದ್ಯುತ್ ಚಾಲಿತ ವಾಹನದ (ಇವಿ) ಬ್ಯಾಟರಿ ತಯಾರಿಸುವ ಕಂಪನಿಯ ಸ್ಥಾಪಕರಲ್ಲಿ ಒಬ್ಬರಾಗಿರುವ ಜಗದೀಪ್ ಸಿಂಗ್ ದಿನಕ್ಕೆ ₹48 ಕೋಟಿ ಆದಾಯ ಗಳಿಸುತ್ತಾರೆ. ಇವರ ವಾರ್ಷಿಕ ಆದಾಯ ₹17,500 ಕೋಟಿ ಆಗಿದೆ. ಎನ್‌ಡಿಟಿವಿ ವರದಿ ಪ್ರಕಾರ ಸಿಂಗ್ ಅವರ ದಿನದ ಸಂಬಳ ಕೆಲವು ಪ್ರಮುಖ ಕಂಪನಿಗಳ ವಾರ್ಷಿಕ ಆದಾಯಕ್ಕಿಂತ ಅಧಿಕವಾಗಿದೆ. ಸಿಂಗ್ ಹೆವ್ಲೆಟ್-ಪ್ಯಾಕರ್ಡ್ ಮತ್ತು ಸನ್ ಮೈಕ್ರೋಸಿಸ್ಟಮ್ಸ್‌ನಲ್ಲಿ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದರು. ಬಳಿಕ 1992 ಆರಂಭವಾದ ಏರ್ ಸಾಫ್ಟ್ ಸೇರಿ ಹಲವು ನವೋದ್ಯಮಗಳನ್ನು ಸಿಂಗ್ ಆರಂಭಿಸಿದ್ದಾರೆ. ಸಿಂಗ್ ಅವರು ಸ್ಟಾನ್ ಫೋರ್ಡ್ ಯುನಿವರ್ಸಿಟಿಯಲ್ಲಿ ಬಿ–ಟೆಕ್ ಪದವಿ ಪಡೆದಿದ್ದಾರೆ. ಜತೆಗೆ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಸಿಂಗ್ 2010ರಲ್ಲಿ ಕ್ವಾಂಟಮ್ ಸ್ಕೇಪ್ ಕಂಪನಿ ಆರಂಭಿಸಿದರು. ಇದು ವಿಶೇಷವಾಗಿ ಬ್ಯಾಟರಿ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರವನ್ನು ಸಾಧಿಸಿದೆ. ಕ್ವಾಂಟಮ್ ಸ್ಕೇಪ್ ಕಂಪನಿಯಲ್ಲಿ ಸಾಂಪ್ರದಾಯಿಕ ಲೀಥಿಯಂ ಐಯಾನ್ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸುವ ಬದಲು ವಿದ್ಯುತ್ ಚಾಲಿತ ವಾಹನಗಳಿಗೆ ಘನ ಸ್ಥಿತಿಯ ಬ್ಯಾಟರಿಗಳನ್ನು ಅಳವಡಿಸಲಿದೆ. ಇದು ವಾಹನಗಳು ವೇಗವಾಗಿ ಚಾರ್ಜ್ ಆಗುವಂತೆ ಮಾಡಬಲ್ಲದು. ಜತೆಗೆ ಇಂಧನ ಸಾಂದ್ರತೆಯನ್ನೂ ಹೆಚ್ಚಿಸಲು ನೆರವಾಗುತ್ತದೆ. ಈ ಮೂಲಕ ವಿದ್ಯುತ್ ಚಾಲಿತ ವಾಹನಗಳ ಬಳಕೆದಾರರು ಎದುರಿಸುವ ಸಮಸ್ಯೆ ನಿವಾರಣೆಯಾಗುತ್ತದೆ ಎನ್ನುವುದು ಈ ಕಂಪನಿಯ ಧೋರಣೆಯಾಗಿದೆ. ಕಳೆದ ಫೆಬ್ರುವರಿಯಲ್ಲಿ ಸಿಂಗ್ ಅವರು ಕಂಪನಿಯ ಸಿಇಒ ಸ್ಥಾನದಿಂದ ಕೆಳಕ್ಕಿಳಿದು 2023ರಲ್ಲಿ ಕಂಪನಿಯ ಅಧ್ಯಕ್ಷರಾಗಿ ಸೇರಿದ್ದ ಶಿವ ಶಿವರಾಮ ಎನ್ನುವವರನ್ನು ಸಿಇಒ ಆಗಿ ಮಾಡಿದ್ದರು. ಆದರೆ ಕಂಪನಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸಿಂಗ್ ಮುಂದುವರಿದಿದ್ದಾರೆ.
Share