ನವದೆಹಲಿ: ‘ಅಕ್ರಮವಾಗಿ ನೆಲೆಸಿರುವ ಆರೋಪದಡಿ ಅಮೆರಿಕದಿಂದ ಗಡೀಪಾರಾಗಿರುವ ಭಾರತೀಯರ ಕೈಗೆ ಕೋಳ ತೊಡಿಸಿ ಕಳಹಿಸುವ ಮೂಲಕ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ’ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ವಿಷಯ ಹಂಚಿಕೊಂಡಿರುವ ಕಾಂಗ್ರೆಸ್‌ನ ಮಾಧ್ಯಮ ವಿಭಾಗ ಮುಖ್ಯಸ್ಥ ಪವನ್ ಖೇರಾ, ‘ಅಮೆರಿಕದಿಂದ ಕಳುಹಿಸುತ್ತಿರುವ ಭಾರತೀಯರ ಕೈಗೆ ಕೋಳ ತೊಡಿಸಿರುವ ಚಿತ್ರವನ್ನು ಕಂಡು ಭಾರತೀಯನಾದ ನನ್ನಲ್ಲಿ ತೀವ್ರ ಬೇಸರವನ್ನುಂಟು ಮಾಡಿದೆ. 2013ರಲ್ಲಿ ದೇವಯಾನಿ ಅವರ ಕೈಗೂ ಕೋಳ ತೊಡಿಸಿ ಅಮೆರಿಕದಿಂದ ಕಳುಹಿಸಲಾಗಿತ್ತು. ಇದರ ವಿರುದ್ಧ ಅಮೆರಿಕದ ರಾಯಭಾರಿ ನ್ಯಾನ್ಸಿ ಪೊವೆಲ್ ಅವರ ಬಳಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದರು’ ಎಂದಿದ್ದಾರೆ. ‘ಇದಕ್ಕೆ ಅಂದಿನ ಯುಪಿಎ ಸರ್ಕಾರ ಖಡಕ್ ಸಂದೇಶವನ್ನು ಅಮೆರಿಕಕ್ಕೆ ರವಾನಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಕಳುಹಿಸಿದ ನಿಯೋಗದಲ್ಲಿದ್ದ ಜಾರ್ಜ್ ಹೋಲ್ಡಿಂಗ್, ಪೀಟ್ ಒಲ್ಸನ್, ಡೇವಿಡ್ ಶ್ವೆಕರ್ಟ್, ರಾಬ್ ವುಡ್‌ಲ್ಯಾಂಡ್, ಮೆಡೆಲಿನ್ ಬೊರ್ಡಾಲೊ ಅವರನ್ನು ಪಕ್ಷದ ಮುಖಂಡರಾದ ಮೀರಾ ಕುಮಾರ್, ಸುಶಿಲ್ ಕುಮಾರ್ ಶಿಂದೆ, ರಾಹುಲ್ ಗಾಂಧಿ ಭೇಟಿ ಮಾಡಿ ಪ್ರತಿಭಟನೆ ದಾಖಲಿಸಿದ್ದರು’ ಎಂದು ನೆನಪಿಸಿಕೊಂಡಿದ್ದಾರೆ. ‘ಭಾರತದ ಅಧಿಕಾರಿ ದೇವಯಾನಿ ಅವರನ್ನು ನಡೆಸಿಕೊಂಡ ರೀತಿ ಶೋಚನೀಯ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು. ಅಮೆರಿಕದ ರಾಯಭಾರ ಕಚೇರಿಗೆ ಭಾರತ ನೀಡುತ್ತಿದ್ದ ಹಲವು ಸೌಲಭ್ಯಗಳನ್ನು ಮೊಟಕುಗೊಳಿಸಲಾಗಿತ್ತು. ಇದರಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದ ಆಹಾರ, ಮದ್ಯ ಸೇರಿದ್ದವು’ ಎಂದಿದ್ದಾರೆ. ‘ಅಮೆರಿಕದ ಎಂಬೆಸಿ ಶಾಲೆಯ ಹಣಕಾಸು ವ್ಯವಹಾರಗಳ ಕುರಿತು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಿತು. ದೇವಯಾನಿ ಅವರನ್ನು ನಡೆಸಿಕೊಂಡ ರೀತಿಗೆ ಜಾನ್ ಕೇರಿ ಬೇಸರ ವ್ಯಕ್ತಪಡಿಸಿದ್ದರು. ಸುಜಾತಾ ಸಿಂಗ್ ಅವರನ್ನು ಕರೆಯಿಸಿಕೊಂಡ ಅಮೆರಿಕ ಆಡಳಿತ, ಕ್ಷಮೆ ಕೇಳಿತ್ತು’ ಎಂದು ಖೇರಾ ಹೇಳಿದ್ದಾರೆ.
Share