ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಅವರನ್ನ ನಟ ಕಿಚ್ಚ ಸುದೀಪ್ ಅವರು ಸದಾಶಿವ ನಗರದ ನಿವಾಸದಲ್ಲಿ ದಿಢೀರ್ ಭೇಟಿಯಾಗಿರುವುದು ಅಚ್ಚರಿ ಮೂಡಿದಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವ ಮನೆಗೆ ತೆರಳಿ ನಟ ಕಿಚ್ಚ ಸುದೀಪ ಅವರು ಕೆಲಹೊತ್ತು ಅವರೊಂದಿಗೆ ಚರ್ಚೆ ಮಾಡಿದ್ದಾರೆ. ಸುದೀಪ್ ಅವರೊಂದಿಗೆ ನಟ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಕೂಡ ಅವರೊಂದಿಗೆ ಸಾಥ್ ನೀಡಿದ್ದಾರೆ. ಗುರುವಾರ ಬೆಳಗ್ಗೆಯೇ ಡಿ.ಕೆ. ಶಿವಕುಮಾರ್ ಅವರ ಮನೆಗೆ ತೆರಳಿದ ಸುದೀಪ್ ಹಾಗೂ ಅನೂಪ್ ಭಂಡಾರಿ ಅವರು ಕೆಲ ಹೊತ್ತು ಚರ್ಚೆ ಮಾಡಿ ಹೊರಗೆ ಬಂದಿದ್ದಾರೆ. ಇದು ರಾಜಕೀಯ ಅಥವಾ ಬೇರೆ ಯಾವ ಕುರಿತಾದ ಚರ್ಚೆ ಎಂಬುದು ಭಾರೀ ಕುತೂಹಲ ಕೆರಳಿಸಿತ್ತು. ಇದರ ಬೆನ್ನಲ್ಲಿಯೇ ಡಿ.ಕೆ. ಶಿವಕುಮಾರ್ ಸ್ಪಷ್ಟೀಕರಣ ನೀಡಿದ್ದಾರೆ. ನಟ ಸುದೀಪ್ ಭೇಟಿಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಸುದೀಪ್ ಅವರದ್ದೇನೋ ಪರ್ಸನಲ್ ಇಶ್ಯೂ ಇತ್ತು. ಅವರದು ಶೂಟಿಂಗ್ ಮಾಡುವ ಜಾಗದ ಕುರಿತಾಗಿ ಏನೋ ಸಮಸ್ಯೆಯ ಬಗ್ಗೆ ಚರ್ಚೆ ಮಾಡುವುದಿತ್ತು. ಆಸ್ ಎ ಫ್ರೆಂಡ್ (As a Friend) ಆಗಿ ಅವರು ನಮ್ಮ ಮನೆಗೆ ಭೇಟಿ ಮಾಡುವುದಕ್ಕೆ ಬಂದಿದ್ದರು. ಸಿನಿಮಾ ಶೂಟಿಂಗ್ ಜಾಗದ ವಿಚಾರವಾಗಿ ಅವರೊಂದಿಗೆ ನಾನು ಮಾತನಾಡಿದ್ದೇನೆ. ಅದನ್ನು ಬಿಟ್ಟು ಬೇರೆನೂ ಚರ್ಚೆ ಮಾಡಿಲ್ಲ. ಅವರ ಭೇಟಿಯಲ್ಲಿ ರಾಜಕೀಯನೂ ಇಲ್ಲಾ…, ಎನೂ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟೀಕರಣ ನೀಡಿದರು. ಕಿಚ್ಚ ಸುದೀಪ್ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಪಂದ್ಯಕ್ಕೆ ಆಹ್ವಾನ ನೀಡಲು ಆಗಮಿಸಿದ್ದರು ಎಂದೂ ಹೇಳಲಾಗುತ್ತಿದೆ. ಫೆ.8 ಮತ್ತು ಫೆ.9ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಎಲ್ ಪಂದ್ಯಗಳು ನಡೆಯಲಿದೆ. ಫೆಬ್ರವರಿ 8 ರಂದು ಹೈದರಾಬಾದ್ ವಿರುದ್ದ ಮೊದಲ ಪಂದ್ಯ ಆಡಲಿರುವ ಕರ್ನಾಟಕ ಬುಲ್ಡೋಜರ್ ಪಂದ್ಯ ನಡೆಯಲ್ಲಿದ್ದು, ಈ ಪಂದ್ಯ ವೀಕ್ಷಣೆಗೆ ಬರುವಂತೆ ಆಹ್ವಾನಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.
Share