ಪ್ರಯಾಗರಾಜ್: ಮಹಾ ಕುಂಭಮೇಳದಲ್ಲಿ ಮಹಿಳಾ ಯಾತ್ರಾರ್ಥಿಗಳು ಸ್ನಾನ ಮಾಡುತ್ತಿರುವ ಆಕ್ಷೇಪಾರ್ಹ ವೀಡಿಯೊಗಳನ್ನು ಪೋಸ್ಟ್ ಮಾಡಿದ ಮತ್ತು ಮಾರಾಟ ಮಾಡಿದ ಆರೋಪದ ಮೇಲೆ ಎರಡು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಮಹಾ ಕುಂಭಮೇಳಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ದಾರಿತಪ್ಪಿಸುವ ಮತ್ತು ಆಕ್ಷೇಪಾರ್ಹ ಕಂಟೆಂಟ್ ಪೋಸ್ಟ್ ಮಾಡುವುದನ್ನು ತಡೆಗಟ್ಟುವ ಪ್ರಯತ್ನಗಳ ಭಾಗವಾಗಿ ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ ಪ್ರಶಾಂತ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಕೆಲವೊಂದು ಸಾಮಾಜಿಕ ಮಾಧ್ಯಮ ಜಾಲತಾಣಗಳಲ್ಲಿ ಜನತೆಯ ಗೌಪ್ಯತೆ ಮತ್ತು ಘನತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿ, ಕುಂಭಮೇಳದಲ್ಲಿ ಮಹಿಳೆಯರು ಸ್ನಾನ ಮಾಡುವ ಮತ್ತು ಬಟ್ಟೆ ಬದಲಾಯಿಸುವ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿರುವುದನ್ನು ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡ ಪತ್ತೆ ಮಾಡಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಖಾತೆ ಯಾರಿಗೆ ಸೇರಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಇನ್ ಸ್ಟಾಗ್ರಾಮ್ನ ಒಡೆತನ ಹೊಂದಿರುವ ತಂತ್ರಜ್ಞಾನ ಸಂಸ್ಥೆ ಮೆಟಾಗೆ ಕೋರಲಾಗಿದೆ ಮತ್ತು ವಿವರಗಳು ಬಂದ ನಂತರ ಬಂಧನ ಸೇರಿದಂತೆ ಇತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Share