►ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಮುಸ್ಲಿಮರಿಗೆ ಸೌಲಭ್ಯ
ಬೆಂಗಳೂರು: ಪರಿಶಿಷ್ಟ ಜಾತಿ–ಪಂಗಡ, ಹಿಂದುಳಿದವರು ಹಾಗೂ ಮುಸ್ಲಿಂ ಸಮುದಾಯದ ಗುತ್ತಿಗೆದಾರರಿಗೆ ₹2 ಕೋಟಿ ವೆಚ್ಚದ ಕಾಮಗಾರಿಗಳು, ₹1 ಕೋಟಿವರೆಗಿನ ಸರಕು ಮತ್ತು ಸೇವೆಗಳ ಪೂರೈಕೆಯ ಟೆಂಡರ್ ನಲ್ಲಿ ಮೀಸಲಾತಿ ಕಲ್ಪಿಸುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ.
ಗುತ್ತಿಗೆ ಮೀಸಲಾತಿಯು ಈವರೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಪ್ರವರ್ಗ 1ರವರೆಗೆ ಅನ್ವಯವಾಗುತ್ತಿತ್ತು. ಈ ಸೌಲಭ್ಯವನ್ನು ಮುಸ್ಲಿಮರಿಗೆ (ಪ್ರವರ್ಗ 2–ಬಿ) ವಿಸ್ತರಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 7ರಂದು ಮಂಡಿಸಿದ 2025–26ನೇ ಸಾಲಿನ ಬಜೆಟ್‌ನಲ್ಲಿ ಈ ಘೋಷಣೆ ಮಾಡಿದ್ದರು. ಇದಕ್ಕೆ ಪೂರಕವಾಗಿ, ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ಒಪ್ಪಿಗೆ ನೀಡಲಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಪ್ರವರ್ಗ 1 ಮತ್ತು 2ಎಗೆ ಸೇರಿದ ಗುತ್ತಿಗೆದಾರರಿಗೆ ₹1 ಕೋಟಿ ವೆಚ್ಚದವರೆಗಿನ ಕಾಮಗಾರಿಗಳಿಗೆ ಮಾತ್ರ ಮೀಸಲಾತಿ ಕಲ್ಪಿಸಲು ಅವಕಾಶ ಇತ್ತು. ಈ ಮಿತಿಯನ್ನು ₹2 ಕೋಟಿಗೆ ಹೆಚ್ಚಿಸಲು ಈ ತಿದ್ದುಪಡಿ ಅನುಕೂಲ ಮಾಡಿಕೊಡಲಿದೆ. ಇದು ಮುಸ್ಲಿಂ ಸಮುದಾಯದ ಗುತ್ತಿಗೆದಾರರಿಗೂ ಅನ್ವಯವಾಗಲಿದೆ.
ಸರ್ಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳಿಗೆ ಸಾಮಗ್ರಿ, ಸಾಧನ–ಸಲಕರಣೆಗಳು ಹಾಗೂ ಮಾನವ ಸಂಪನ್ಮೂಲದ ಪೂರೈಕೆಯ (ಸಂಗ್ರಹಣೆ) ಟೆಂಡರ್ ಪ್ರಕ್ರಿಯೆಯಲ್ಲಿ ಈವರೆಗೆ ಮೀಸಲಾತಿ ಇರಲಿಲ್ಲ. ಮುಂದೆ, ₹1 ಕೋಟಿವರೆಗಿನ ಸರಕು ಮತ್ತು ಸೇವೆಗಳ ಸಂಗ್ರಹಣೆಯಲ್ಲಿ ಮೀಸಲಾತಿ ಕಲ್ಪಿಸಲು ತಿದ್ದುಪಡಿ ಮಸೂದೆ ದಾರಿ ಮಾಡಿಕೊಡಲಿದೆ.
Share