ಚೆನ್ನೈ: ಮಹತ್ವಾಕಾಂಕ್ಷೆಯ ‘ಚಂದ್ರಯಾನ–5’ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಇತ್ತೀಚೆಗೆ ಒಪ್ಪಿಗೆ ನೀಡಿದೆ ಎಂದು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಹೇಳಿದ್ದಾರೆ.
ಇಸ್ರೊ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪ್ರಯುಕ್ತ ಇಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡುವ ವೇಳೆ ಅವರು ಈ ವಿಷಯ ತಿಳಿಸಿದ್ದಾರೆ.
‘ಚಂದಿರ ಅಂಗಳದ ಅಧ್ಯಯನಕ್ಕಾಗಿ, ಚಂದ್ರಯಾನ–3ರ ಗಗನನೌಕೆ 25 ಕೆ.ಜಿ ಭಾರದ ರೋವರ್ (ಪ್ರಗ್ಯಾನ್) ಹೊತ್ತೊಯ್ದಿತ್ತು. ಚಂದ್ರನ ಮೇಲ್ಮೈ ಅಧ್ಯಯನ ಉದ್ದೇಶದ ಚಂದ್ರಯಾನ–5ರ ಗಗನನೌಕೆ 250 ಕೆ.ಜಿ ಭಾರದ ರೋವರ್ ಒಯ್ಯಲಿದೆ’ ಎಂದು ಹೇಳಿದ್ದಾರೆ.
‘ಚಂದ್ರಯಾನ–2ರ ಗಗನನೌಕೆಯಲ್ಲಿ ಅಳವಡಿಸಿದ್ದ ಕ್ಯಾಮೆರಾಗಳು ಈಗಲೂ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಕಳುಹಿಸುತ್ತಿದೆ’ ಎಂದೂ ಹೇಳಿದ್ದಾರೆ.
‘ಚಂದ್ರಯಾನ–4’ ಕಾರ್ಯಕ್ರಮದಡಿ 2027ರಲ್ಲಿ ಗಗನನೌಕೆಯನ್ನು ಕಳುಹಿಸಲಾಗುತ್ತಿದ್ದು, ಚಂದ್ರನ ಮೇಲ್ಮೈನಲ್ಲಿರುವ ಮಾದರಿಗಳನ್ನು ಸಂಗ್ರಹಿಸಿ, ಭೂಮಿಗೆ ತರುವ ಉದ್ದೇಶ ಹೊಂದಲಾಗಿದೆ.
Share