ಬೆಂಗಳೂರು: ಆರ್‌ಎಸ್‌ಎಸ್‌ನಿಂದಲೇ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದು, ಈ ಹೇಳಿಕೆ ವಿರುದ್ಧ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿವೆ.
ಇದೀಗ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಖಾಸಗಿ ದೂರು ದಾಖಲಿಸಲಾಗಿದೆ.
ಕಿರಣ್.ಎಸ್ ಎಂಬುವರು ಖಾಸಗಿ ದೂರು ಸಲ್ಲಿಸಿದ್ದು, ಬಿಎನ್ಎಸ್ ಸೆಕ್ಷನ್ 299,352,356(2)ಅಡಿ ಕ್ರಮಕ್ಕೆ ಮನವಿ ಮಾಡಿದ್ದಾರೆ.
ಸಿಎಂ ಹೇಳಿದ್ದನು?
ಮೊದಲಿಗೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂಬ ರಾಜ್ಯಪಾಲರ ಮಾತು ಸರಿಯಿದೆ. ಕಳೆದ ಸರ್ಕಾರದ ಅವಧಿಗಿಂತ ಕೊಲೆ, ಕೊಲೆ ಯತ್ನ, ದರೋಡೆ, ಕಳ್ಳತನ, ಅತ್ಯಾಚಾರ ಎಲ್ಲಾ ಪ್ರಕರಣಗಳೂ ನಮ್ಮ ಸರ್ಕಾರದ ಅವಧಿಯಲ್ಲಿ ಕಡಿಮೆಯಾಗಿವೆ ಎಂದು 2022 ಹಾಗೂ 2024 ನೇ ಸಾಲಿನ ಅಪರಾಧ ಪ್ರಕರಣಗಳನ್ನು ಅಂಕಿ-ಅಂಶಗಳ ಸಹಿತ ಬಿಚ್ಚಿಟ್ಟರು. ಅಲ್ಲದೆ ಮಂಗಳೂರಿನಲ್ಲಿ 75 ಕೋಟಿ ರು. ಡ್ರಗ್ಸ್ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದೇವೆ. ನೀವೇ ನಮ್ಮ ಪೊಲೀಸರಿಗೆ ಅಭಿನಂದನೆ ಹೇಳಿದ್ದೀರಿ. ನಾವು ಅಧಿಕಾರಕ್ಕೆ ಬಂದ ಮೇಲೆ ಅಪರಾಧಗಳನ್ನು ಎಷ್ಟು ತಗ್ಗಿಸಲು ಸಾಧ್ಯವೋ ಅಷ್ಟು ಮಾಡಿದ್ದೇವೆ. ಹಾಗಂತ ನಮಗಿನ್ನೂ ತೃಪ್ತಿಯಾಗಿಲ್ಲ. ಇನ್ನೂ ಇಳಿಕೆ ಮಾಡುವ ಉದ್ದೇಶವಿದೆ. ಆದರೆ ಅಪರಾಧಗಳನ್ನು ಮಾಡುವುದೇ ನೀವು. ನಿಮ್ಮ ಆರ್‌ಎಸ್‌ಎಸ್‌ನವರಿಂದಲೇ ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದರು.